ಅಪವಿತ್ರಕಾರ್ಯ
	
ಪವಿತ್ರ ಸ್ಥಾನಗಳಲ್ಲಿ ಪವಿತ್ರ ಉದ್ದೇಶಗಳಿಗಾಗಿ ಮೀಸಲಿಟ್ಟ ವಸ್ತುಗಳ ಅಪಹಾರ, ದುರುಪಯೋಗಗಳು ಅಪವಿತ್ರಕಾರ್ಯವೆಂಬ (ಸ್ಯಾಕ್ರಿಲೇಜ್) ಭಾವನೆ ಪ್ರಾಚೀನರಿಂದ ಆಧುನಿಕರವರೆಗಿನ ಕಾನೂನು ಕಟ್ಟಲೆಗಳಲ್ಲಿ ಅಂತರ್ಗತವಾಗಿರುವ ಅಂಶ. ಅಪವಿತ್ರಕಾರ್ಯದ ಅರ್ಥವ್ಯಾಪ್ತಿ ಕಾಲಾಂತರದಲ್ಲಿ ವಿಸ್ತøತಗೊಂಡಿದೆ. ಗೋರಿಗಳನ್ನು ಒಡೆಯವುದು, ರಾಜ್ಯರಕ್ಷಕ ದೇವತೆಗಳ ಮತ್ತು ದೇವಾಂಶಸಂಭೂತನಾದ ರಾಜನ ವಿರುದ್ಧ ಎಸಗುವ ಅಪರಾಧಗಳು ರಾಜಾಜ್ಞೆಯ ಉಲ್ಲಂಘನೆ, ಆದಾಯದ ದಶಾಂಶವನ್ನು ದೇವಾಲಯಗಳಿಗೆ ಸಲ್ಲಿಸದಿರುವುದು ಇವೇ ಮುಂತಾದ ಅಪರಾಧಗಳನ್ನು ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಅಪವಿತ್ರ ಕಾರ್ಯಗಳೆಂದೇ ಭಾವಿಸಿ ಶಿಕ್ಷಿಸುತ್ತಿದ್ದರು. ಶಿಕ್ಷೆ ಸಾಮಾನ್ಯವಾಗಿ ಮರಣದಂಡನೆ. ಕಾಲಾಂತರದಲ್ಲಿ ಇವನ್ನು ಬರಿಯ ಅಪರಾಧಗಳೆಂದು ಗಣಿಸಿ ದಂಡ, ಶಿಕ್ಷೆ ವಿಧಿಸಲಾರಂಭಿಸಿದರು. ದೈವಸನ್ನಿಧಿಯಲ್ಲಿ ಶರಣಾಗತನಾದವನನ್ನು ಮುಟ್ಟುವುದೂ ಅಪವಿತ್ರಕಾರ್ಯವೆಂದು ಪ್ರಾಚೀನ ಗ್ರೀಕರು ನಂಬಿದ್ದರು. ನ್ಯಾಯಿ, ಅನ್ಯಾಯಿಗಳಿಬ್ಬರಿಗೂ ದೈವಸನ್ನಿಧಿ ಸಮಾನವಾದ ಆಶ್ರಯವಾಗಿಬಿಟ್ಟಿದೆಯೆಂಬ ಯೂರಿಪಿಡೀಸನ ದೂರು. ಕೊಲೆಗಡುಕರು, ಅಪರಾಧಿಗಳೇ ಮುಂತಾದವರು ಶಿಕ್ಷೆ ತಪ್ಪಿಸಿಕೊಳ್ಳಲು ದೈವಾಶ್ರಯ ಪಡೆಯುತ್ತಿದ್ದುದರ ಬಗ್ಗೆಯೇ ಯುದ್ಧದಲ್ಲೂ ಪವಿತ್ರಸ್ಥಾನಗಳ ಆಕ್ರಮಣ ಗ್ರೀಕರಲ್ಲಿ ನಿಷಿದ್ಧವಾಗಿತ್ತು. ಈ ಪದ್ಧತಿಯಲ್ಲಿ ಗ್ರೀಕರನ್ನು ಅನುಸರಿಸಿದ ರೋಮನ್ನರು ತಮ್ಮ ಆಡಳಿತಕ್ಕೇ ಧಕ್ಕೆ ಬಂದಾಗ ಇದನ್ನು ಕೈಬಿಟ್ಟರು.							

(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ